ಕೀವೊಸಡು

 ಕೀವು ತುಂಬಿದ ಒಸಡು (ಪಯೋರಿಯ). ಒಸಡಿನಲ್ಲಿ ಹಲ್ಲುಗಳಿಗಾಗಿ ಕುಳಿಗಳಿವೆ. ಇವುಗಳಲ್ಲಿ ನೆಲೆಸಿದರುವ ಹಲ್ಲುಗಳ ಸುತ್ತ ಅಂಗಾಂಶ ಬೆಳೆದು ಹಲ್ಲುಗಳು ಅಲುಗಾಡದೆ ಭದ್ರವಾಗಿರುತ್ತವೆ. ಹುಳುಕುಹಲ್ಲಿನಿಂದ ಇಲ್ಲವೇ ಹಲ್ಲಿಗೆ ಏಟು ಬೀಳುವುದರಿಂದ ಈ ಅಂಗಾಂಶ ಸೋಂಕಿಗೆ ಈಡಾಗುತ್ತದೆ. ಅದರಲ್ಲಿ ಮೊದಲಿಗೆ ಉರಿಯೂತ ಕಾಣಿಸಿಕೊಂಡು ಅಂಗಾಂಶ ಹಾಳಾಗತೊಡಗುತ್ತದೆ. ಅನಂತರ ಹಲ್ಲಿಗೆ ಬೆಂಬಲವಾಗಿರುವ ಸುತ್ತಲಿನ ಮೂಳೆ ಕೂಡ ನಾಶವಾಗತೊಡಗುತ್ತದೆ. ಈ ಸ್ಥಿತಿಯೇ ಕೀವೊಸಡು. ಹಲ್ಲಿನ ಬಳಿ ಕೀವು ಕಾಣಿಸುವ ಮೊದಲೇ ಹಲ್ಲಿನ ಸುತ್ತ ಇರುವ ಮೂಳೆ ಹಾಗೂ ಅಂಗಾಂಶ ಬಹಳಷ್ಟು ಹಾಳಾಗಿರುತ್ತವಾದ್ದರಿಂದ ಈ ಸ್ಥಿತಿ ರೋಗದ ಕೊನೆಯ ಹಂತವನ್ನು ಪ್ರತಿನಿಧಿಸುತ್ತದೆ. ಕೆಲವೇ ದಿವಸಗಳಲ್ಲಿ ಹಲ್ಲು ಬೀಳುತ್ತದೆ. ಕೀವೊಸಡಿನಲ್ಲಿ ಒಸಡಿನ ಒಳ ಹಾಗೂ ಹೊರಭಾಗಗಳಲ್ಲಿರುವ ಅಂಗಾಂಶಕ್ಕಿಂತ ಹಲ್ಲುಗಳ ಮಧ್ಯೆ ಇರುವ ಅಂಗಾಂಶ ಹೆಚ್ಚಾಗಿ ನಾಶಹೊಂದುತ್ತದೆ. ಮೇಲ್ದವಡೆಯಲ್ಲಿನ ಕೀವೊಸಡಿನಿಂದ ಸೋಂಕು ಮೇಲ್ದವಡೆಯ ಮೂಳೆಗೂ ಹರಡುವ ಸಾಧ್ಯತೆ ಉಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ